ಗಾದೆಗಳು
ತಲೆಮಾರಿನಿಂದ ತಲೆಮಾರಿಗೆ ಪರಂಪರಾಗತವಾಗಿ ಹರಿದು ಬಂದಿರುವ ಸಾಂದ್ರವೂ ಬೋಧಪರವೂ ಆದ ಸೂಕ್ತಿಯೇ ಗಾದೆ (ಪ್ರಾವರ್ಬ್). ಕನ್ನಡದಲ್ಲಿ ಗಾದೆ ಪದಕ್ಕೆ ಸಂವಾದಿಯಾಗಿ ನಾಣ್ಣುಡಿ ಎಂಬ ಪದವೂ ಪ್ರಚಲಿತವಿದೆ. ಗಾದೆ ಸಂಸ್ಕೃತದ ಗಾಥಾ ಪದದಿಂದ ಬಂದಿದ್ದೆಂದು ಹೇಳುತ್ತಾರೆ. ಇದು ಗಾಥಾ ಪದದ ನೇರ ತದ್ಭವವೊ ಅಥವಾ ಪ್ರಾಕೃತದ ಗಾಹೆಯ ಮೂಲಕ ಬಂದುದೊ ಹೇಳಲು ಕಷ್ಟ. ಆದರೆ ಗಾಥಾ ಎಂಬುದು ಮೂಲದಲ್ಲಿ ಒಂದು ಛಂದಸ್ಸಿನ ಜಾತಿಯನ್ನು ಸೂಚಿಸುತ್ತದೆಯೆಂದು ಮಾತ್ರ ಹೇಳಬಹುದು. ಅಂತು ‘ನಾಣ್ಣುಡಿ’ ಯನ್ನು ಮರೆಸುವಷ್ಟರಮಟ್ಟಿಗೆ ‘ಗಾದೆ’ ಪ್ರಚಾರದಲ್ಲಿದೆ. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಸೂತ್ರ, ಉದ್ಧರಣೆ, ಲೋಕೋಕ್ತಿ, ಪ್ರಾಚೀನೋಕ್ತಿ ಇತ್ಯಾದಿಗಳು ಬಳಕೆಯಾಗಿದ್ದರೂ ಮೂಲಾರ್ಥದಲ್ಲಿ ಇವೆಲ್ಲವೂ ಒಂದೇ ಎನ್ನಲಾಗುವುದಿಲ್ಲ.

ಜನಪದ ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಿಗಿಂತ ಗಾದೆ ವ್ಯಾಪಕವೂ ಜನ ಸಂಮುಖವೂ ಆಗಿದೆಯಲ್ಲದೆ, ಜನಸಾಮಾನ್ಯರ ಬದುಕು ಭಾಷೆಗಳಲ್ಲಿ ಹಾಸು ಹೊಕ್ಕಾಗಿದೆ. ಗ್ರಾಮೀಣ ಜನ ಮಾತನಾಡುವಾಗಲೆಲ್ಲ ಗಾದೆಗಳು ಪುಂಖಾನು ಪುಂಖವಾಗಿ ಬರುವುದನ್ನು ಕಾಣುತ್ತೇವೆ. ಅವಿಲ್ಲದೆ ಹೋದರೆ ಮಾತು ಸಪ್ಪೆಯಾಗುತ್ತದೆ. ಆದ್ದರಿಂದಲೆ ಸಮಯಕ್ಕೆ ಸರಿಯಾಗಿ ಗಾದೆ ಬಾರದೆ ಹೋದರೆ, ಹಿಂದಕ್ಕೆ ಏನೋ ಗಾದೆ ಹೇಳಿದ ಹಾಗಾಯ್ತು ಎಂದು ಹೇಳುವುದರ ಮೂಲಕ ಅದರ ಆವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. ಗಾದೆ ಆಡುಮಾತಿನ ಜೀವಸತ್ತ್ವ ಎಂಬುದನ್ನು ಇದು ತೋರಿಸಿಕೊಡುತ್ತದೆ. ಊಟಕ್ಕೆ ಉಪ್ಪಿನಕಾಯಿಯಂತೆ ಗಾದೆ ಮಾತಿಗೆ ವ್ಯಂಜನಶಕ್ತಿಯನ್ನು ಒದಗಿಸುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯೇ ಗಾದೆಯ ಸ್ವರೂಪವನ್ನು ತಿಳಿಸುತ್ತದೆ. ಇದು ಆಕಾರದಲ್ಲಿ ವಾಮನನಾಗಿ ಅರ್ಥದಲ್ಲಿ ತ್ರಿವಿಕ್ರಮವೆನಿಸಿದೆ.

ಗಾದೆ ಜನಜೀವನದ ವ್ಯಾಪಕ ಸತ್ತ್ವ, ತತ್ತ್ವ: ನೂರು ಭಾವದ ನೂರು ವಿಷಯದ ನೂರು ಅಭಿವ್ಯಕ್ತಿ. ಇಲ್ಲಿ ವ್ಯಕ್ತಗೊಂಡಿರುವ ಅನುಭವಜಗತ್ತು ಅನ್ಯಾದೃಶವಾದುದು. ಹಾಗೆ ನೋಡಿದಾಗ ಇವುಗಳ ಕರ್ತಾರರನ್ನು ಅಸಂಸ್ಕೃತರೆನ್ನುವುದು ದೂರದ ಮಾತಾಗಿಯೇ ಉಳಿಯುತ್ತದೆ. ಗ್ರಾಮಜೀವನಕ್ಕೆ ಕಾಲಿರಿಸಿದ ಕೂಡಲೇ ಇಂಥ ಗಾದೆಗಳ ಬಿಸಿ ತಾಗುತ್ತದೆ. ಕೆಲವು ಬೆಳದಿಂಗಳಿನಂತೆ ತಂಪಾದರೆ, ಮತ್ತೆ ಕೆಲವು ಬಿಸಿಲಿನಂತೆ ಮೈ ಸುಡುತ್ತವೆ; ಬೆಂಕಿಯ ಕಿಡಿಗಳಂತೆ ಕೆಲವಾದರೆ, ಇಬ್ಬನಿಯಂಥವು ಮತ್ತೆ ಕೆಲವು; ಕೆಲವು ಮುತ್ತಿಕ್ಕಿದರೆ, ಮತ್ತೆ ಕೆಲವು ಮುತ್ತಿಗೆ ಹಾಕುತ್ತವೆ. ಇನ್ನು ಕೆಲವಂತೂ ಸಿಡಿಲಪೊಟ್ಟಣಗಳೇ ಸರಿ. ಇವಕ್ಕೆ ಅಪಮೌಲ್ಯದ ಭಯವಿಲ್ಲ, ಕೊಳೆಕಟ್ಟಿ ಮಾಸಿ ಹೋಗುತ್ತವೆ ಎಂಬ ಶಂಕೆಯಿಲ್ಲ. ಇವು ನೀರಸ ಕವಿಸಮಯಗಳಲ್ಲ, ವಿಚಾರದ ವಿಸ್ಫುಲಿಂಗಗಳು; ಸೂಕ್ತ ಸಂದರ್ಭಗಳಲ್ಲಿ ತಾಳಿದ ಯೋಗ್ಯ ನಿರ್ಣಯಗಳು.

ಗಾದೆ ಹಲವಾರು ಮಾತುಗಳ ಘಟಕ. ಆದ್ದರಿಂದಲೇ ಅದು ಸಾವಿರ ಮಾತಿನ ಸರದಾರ. ಅದು ಹಲವರ ಜ್ಞಾನ, ಒಬ್ಬನ ವಿವೇಕ ವ್ಯಾಖ್ಯಾನವನ್ನು ಅಪೇಕ್ಷಿಸುವ ಹೇಳಿಕೆ. ರಾಷ್ಟ್ರೀಯ ಮಣ್ಣಿನಲ್ಲಿ ಬೆಳೆದ ಬೆಳೆ. ಜರ್ಮನ್ ಗಾದೆಗಳ ಸಂಗ್ರಹಕಾರ ಇಸೆಲಿಯನ್ನನ ಪ್ರಕಾರ, ಗಾದೆಗಳೆಂದರೆ ಜನಸಾಮಾನ್ಯರಲ್ಲಿ ಚಲಾವಣೆಯಲ್ಲಿರುವ ಸಾರ್ವಜನಿಕ ಮುದ್ರೆ ಬಿದ್ದಿರುವ ಪ್ರಚಲಿತವೂ ಸ್ವೀಕೃತ ಮೌಲ್ಯಭರಿತವೂ ಆಗಿರುವ ನಾಣ್ಯ. ಎಸ್. ಜಿ. ಚಾಂಪಿಯನ್ ಎಂಬ ವಿದ್ವಾಂಸ ತನ್ನ ಜನಾಂಗಿಕ ಗಾದೆಗಳು ಎಂಬ ಬೃಹತ್ ಸಂಕಲನಕ್ಕೆ ಪ್ರಸ್ತಾವನೆ ಬರೆಯುತ್ತ ಹೀಗೆ ಹೇಳಿದ್ದಾನೆ " ನನ್ನ ಅಭಿಪ್ರಾಯದಲ್ಲಿ ಗಾದೆಯೆಂದರೆ ಜನರ ಬಳಕೆಯಲ್ಲಿದ್ದು, ಈಗಲೂ ಇರುವ, ಉಪದೇಶಾತ್ಮಕ ಅಥವಾ ಸಲಹೆಯನ್ನು ನೀಡುವ, ನಿಜವಾದ ಅರ್ಥವನ್ನು ಮರೆಸಿ ಅಲಂಕಾರಿಕವಾಗಿ ವ್ಯಕ್ತವಾಗಿರುವ, ರೂಪಕ ಅಥವಾ ಗೂಢಾರ್ಥದ್ಯೋತಕವಾಗಿ ಕಾಣಿಸಿಕೋಳ್ಳುವ ಜನಾಂಗವೊಂದರ ಸೂಕ್ತಿ". ಇನ್ನೊಬ್ಬ ವಿದ್ವಾಂಸ ಜೆ. ಎ. ಕೆಲ್ಸೊ ಗಾದೆಗಳಲ್ಲಿ ನಾಲ್ಕು ಗುಣಗಳನ್ನು ಹೆಸರಿಸುತ್ತಾನೆ : 
ಸಂಕ್ಷಿಪ್ತತೆ, ವಿವೇಕ ಪುರ್ಣತೆ, ತೀಕ್ಷ್ಣತೆ ಮತ್ತು ಜನಪ್ರಿಯತೆ. ಇವುಗಳ ಒಂದೊಂದರ ವಿವರಣೆ ಅಗತ್ಯವೆನಿಸುತ್ತದೆ.

ಗಾದೆ ಆವಶ್ಯ ಪದಗಳ ಮಿತವ್ಯಯವೇ ಸರಿ. ಅಲ್ಲದೆ ಗಾದೆಯಲ್ಲಿ 20 ಪದಗಳಿಗಿಂತ ಹೆಚ್ಚು ಇರಬಾರದೆಂದು ವಿದ್ವಾಂಸರು ಹೇಳುತ್ತಾರೆ. ಯಾವ ಭಾಷೆ ಅವ್ಯಯ ಮತ್ತು ಪ್ರತ್ಯಯಗಳಲ್ಲಿ ಸಂಪದ್ಯುಕ್ತವಾಗಿರುತ್ತದೊ ಅದು ಗಾದೆ ನಿರ್ಮಾಣಗೊಳ್ಳುವಾಗಲೆ ಹೆಚ್ಚು ವಿಷಯಗಳನ್ನು ತನ್ನಲ್ಲಿ ಅಡಕಮಾಡಿಕೊಳ್ಳುತ್ತದೆ ಎಂದೂ ಒಂದು ಅಭಿಪ್ರಾಯವಿದೆ. ಗಾದೆ ಸಂಕ್ಷಿಪ್ತವಾಗಿರಬೇಕೆಂಬುದನ್ನು ಈ ಎಲ್ಲ ಮಾತುಗಳು ಸಮರ್ಥಿಸುತ್ತವೆ. ಆದರೆ ಕೆಲವು ಗಾದೆಗಳು ಸಹಜವಾಗಿ ನೀಡಿದಾಗಿರುವುದರಿಂದ ಸಂಕ್ಷಿಪ್ತತೆಗೆ ಇವನ್ನು ಅಪವಾದಗಳಾಗಿ ಪರಿಗಣಿಸಬೇಕಾಗುತ್ತದೆ. ಈ ದೀರ್ಘ ಗಾದೆಗಳು ಶಕ್ತನಿರೂಪಣೆ, ಸೂಚ್ಯ ಭಾವುಕತೆ, ಪ್ರಾದೇಶಿಕತೆಗಳಿಗೆ ಹೆಸರಾಗಿದ್ದರೂ ಅನುಭವ ಸಾಂದ್ರತೆಯಲ್ಲಿ ಚಿಕ್ಕ ಗಾದೆಗಳ ಹಾಗೆ ವರ್ಚಸ್ವಿಯಾಗಲಾರವೆಂದು ತೋರುತ್ತದೆ.
ಗಾದೆಯ ಮತ್ತೊಂದು ಅಂಶ ವಿವೇಕಪುರ್ಣತೆ. ಗಾದೆ ಜನಪ್ರಿಯವಾಗಬೇಕಾದರೆ ಬಹಳ ಕಾಲ ಬಾಳಿಕೆ ಬರಬೇಕಾದರೆ ಕಡೆಯ ಪಕ್ಷ ಅದು ವಿವೇಕಯುತವಾಗಿ ಇರಬೇಕಾಗುತ್ತದೆ. ಆದರೂ ಒಂದು ವಿಷಯ ಉಳಿಯುತ್ತದೆ. ವಿವೇಕಯುತವಾದ ಇಂಥ ಕೆಲವು ಸೂಕ್ತಿಗಳು ಮಾತ್ರ ಗಾದೆಗಳಾಗಿ ಉಳಿದವು ಆಗಲಾರವು. ಮುಂದೆ ಅವು ಕಳೆದುಹೋಗಬಹುದು ಅಥವಾ ಸಾಂದರ್ಭಿಕ ಉದ್ಧರಣೆಗಳಾಗಿ ಉಳಿಯ ಬಹುದು. ಇದಕ್ಕೆ ಕಾರಣ ಭಾಗಶಃ ಸಾಂದ್ರತೆ; ಇದರಿಂದಾಗಿಯೇ ಗಾದೆ ಸಾರ್ವಜನಿಕರ ಸ್ವೀಕಾರಾರ್ಹತೆಯನ್ನು ಪಡೆದುಕೊಂಡಿರುವುದು.

ಗಾದೆ ತೀವ್ರಾನುಭವದ ಪರಿಣಾಮಕಾರಿ ಅಭಿವ್ಯಕ್ತಿಯಾಗಿರುವುದೇ ಅದರ ತೀಕ್ಷ್ಣತೆ. ಸೂಕ್ಷ್ಮಸಂವೇದನಾಶೀಲತೆಯೇ ಇದಕ್ಕೆ ಕಾರಣ. ಒಮ್ಮೆಗೇ ನಮ್ಮ ಹೃದಯವನ್ನು ಆಕ್ರಮಿಸುವ ಸಾಮರ್ಥ್ಯ ಅದರದು. ಯಾವುದೇ ವಿಷಯವನ್ನು ಮನಮುಟ್ಟುವಂತೆ ಹೇಳುವ ಸ್ವಭಾವ ಅದರದು. ಗಾದೆಯ ಮತ್ತೊಂದು ಮಹತ್ವದ ಲಕ್ಷಣ ಜನಪ್ರಿಯತೆ. ನಿಜವಾದ ಅರ್ಥದಲ್ಲಿ ಅದು ಜನತೆಯದಾಗಿರಬೇಕೆಂಬುದೇ ಇದರ ತಾತ್ಪರ್ಯ ಒಟ್ಟಿನಲ್ಲಿ ಗಾದೆಗಳು ಚಿಕ್ಕವು, ಪ್ರಸಕ್ತ ವಿಷಯಕ್ಕೆ ಮಾತ್ರ ಸಂಬಂಧಿಸಿದವು, ರಚನೆಯಲ್ಲಿ ಒಪ್ಪವಾದವು, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುವಂಥವು. 

ಗಾದೆಗಳಿಗೆ ಕೆಲವು ನಿರ್ದಿಷ್ಟ ಶೈಲಿಯ ತಂತ್ರಗಳಿವೆ : ಛಂದೋಬದ್ದತೆ, ಪ್ರಾಸಾನು ಪ್ರಾಸ, ಯಮಕ, ಪುನರಾವೃತ್ತಿ, ನಾಟಕೀಯತೆ, ಅಲಂಕಾರ ಮುಂತಾದವು ಅವುಗಳಲ್ಲಿ ಕೆಲವು. ಇವುಗಳ ಯೋಜಿತ ಅಭಿವ್ಯಕ್ತಿಯೇ ಗಾದೆ. ಸುಲಭವಾಗಿ ನೆನಪಿರಿಸಿಕೊಳ್ಳುವುದಕ್ಕೆ ಇವು ನೆರವಾಗುತ್ತವೆ. ಇದಕ್ಕೆ ಯಾವುದೇ ಗಾದೆ ನಿದರ್ಶನವಾಗಬಲ್ಲುದು. ಇಂಥ ಗಾದೆಗಳಲ್ಲಿ ಅತ್ಯುಕ್ತಿ ಮತ್ತು ವಿರೋಧಾಭಾಸಗಳೆರಡೂ ದೊಡ್ಡ ಲಕ್ಷಣಗಳು. ಇಲ್ಲಿ ಅತ್ಯುಕ್ತಿಯೆಂದರೆ ಅತಿಶಯವಾದ ಮಾತೆಂದು ಅರ್ಥ ಮಾಡಿಕೊಳ್ಳಬೇಕು. ಧ್ವನಿ ಮಾರ್ಗವನ್ನು ಇದು ಸೂಚಿಸುತ್ತದೆ.

ಗಾದೆಯ ಒಂದು ವಿಶೇಷ ಲಕ್ಷಣ ಸಮತೋಲನ. ಇದು ಗಾದೆಯ ಸಹಜ ಗುಣವೆಂದು ತೋರುತ್ತದೆ. 
ಉದಾಹರಣೆಗೆ : ನಾಳೆ ನೋಡು ನಮ್ಮ ರಂಗನ ಮೋಟ, ತೆಗೆದು ನೋಡು ನಮ್ಮ ಅಮ್ಮಿಯ ಮುಸುಕ, ಆದಷ್ಟೇ ಆರಂಭ, ಹೂದಷ್ಟೇ ಮಳೆಗಾಲ - ಇತ್ಯಾದಿ. ಇಲ್ಲಿ ಎರಡು ಸಮಭಾಗಗಳು ಕಾಣಿಸಿಕೊಳ್ಳುತ್ತವೆ. ಪುರ್ವೋತ್ತರ ಭಾಗಗಳೆರಡೂ ಛಂದಸ್ಸಿನಲ್ಲಿ ಕಡೆಗೆ ಅಕ್ಷರಗಳ ಸಂಖ್ಯೆಯಲ್ಲಿ ಸಮನಾಗಿ ಬಂದಿವೆ. ಸಮತೋಲನ ಚಿಕ್ಕ ಗಾದೆಗಳಲ್ಲಿ ಕಾಣಬರುವಂತೆ, ತೀರ ದೀರ್ಘ ಗಾದೆಗಳಲ್ಲಿ ಕಾಣಬರದು. ಇಷ್ಟಕ್ಕೂ ಚಿಕ್ಕ ಗಾದೆಗಳೇ ಅತ್ಯುತ್ತಮ ಗಾದೆಗಳೆಂದು ಹೆಸರಾಗಿವೆ.
ಗಾದೆಗಳಲ್ಲಿ ಹಾಸ್ಯ ಮತ್ತು ವಿಡಂಬನೆಗಳೂ ಬರುತ್ತವೆ. ಇವೆರಡೂ ಕೆಲವೊಮ್ಮೆ ಒಂದಾಗಿಯೂ ಕೆಲವೊಮ್ಮೆ ಬೇರೆ ಬೇರೆಯಾಗಿಯೂ ಬರುತ್ತದೆ. ಉದಾಹರಣೆಗೆ : ಮೋಜು ಬಂದಾದೆ ಮೊಗ ಕ್ವಾರೆ ಅಂದ, ನನ್ಗೂ ಮೋಜು ಬಂದಾದೆ ಕದಿನ ಮೂಲ್ಗೆ ಬಿಸ್ಹಾಕಿ ಅಂದ್ಲು. ಯಾವುದೇ ಮರ್ಮವಿಲ್ಲದೆ ನಗಿಸಬಲ್ಲ ಗಾದೆಯಿದು. ಇಂಥ ಹಾಸ್ಯ ಚಿತ್ರಗಳಲ್ಲಿ ಸಂಭಾಷಣೆಯೊಂದು ವಿಶೇಷ. ಮತ್ತೊಂದು ಗಾದೆ : ದುಡುವಂತೆ ಧೂಪ ಹಾಕಿದ್ರೆ, ಗುಡಿಕಲ್ಲೆಲ್ಲ ದಡಾರ್ ಅಂದೊ - ಇಲ್ಲಿಯ ವಿಡಂಬನೆ ಅತ್ಯಂತ ಮೊನಚಾದುದು. ಕೆಲವೊಮ್ಮೆ ತಿಳಿ ಹಾಸ್ಯದಲ್ಲಿಯೇ ವಿಡಂಬನೆ ಮೈತಾಳಬಲ್ಲುದು. ಸಾಯ್ತೀನಿ ಸಾಯ್ತೀನಿ ಅಂಥ, ಸಾವಿರ ಕೋಳಿ ತಿಂದನಂತೆ. ಸಮಾಜವನ್ನು ಪ್ರತಿಬಿಂಬಿಸುವುದರಲ್ಲಿ ಗಾದೆಗಳ ಪ್ರಾಮುಖ್ಯ ಇದೆ. ಜನಪದ ತನ್ನ ಸುತ್ತಮುತ್ತಲ ಸಾಮಗ್ರಿಯನ್ನು ದೃಷ್ಟಾಂತ ರೂಪಕಗಳನ್ನಾಗಿ ಮಾಡಿಕೊಳ್ಳುತ್ತದೆ. ಅನುಭವದ ಪ್ರಾಮಾಣಿಕತೆಗೆ ಕಾವ್ಯತೆಯ ಸೂಕ್ಷ್ಮ ದೃಷ್ಟಿಯನ್ನು ತೊಡಿಸುತ್ತದೆ.

ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹುತೇಕ ಗಾದೆಗಳು ದೈನಂದಿನ ಜೀವನದಿಂದ ತೆಗೆದುಕೊಂಡ ಅಥವಾ ಪ್ರಕೃತಿ ಪರಿಶೀಲನದಿಂದ ಎತ್ತಿಕೊಂಡ ರೂಪಕಗಳು ಅಥವಾ ಅನುಭವದ ಘನೀಕರಣಗಳು. ಕೆಲವು ಗಾದೆಗಳು ಕೌಟುಂಬಿಕ ಕಸುಬುಗಳಿಗೆ ಸಂಬಂಧಿಸಿದ ಆಧಾರಗಳನ್ನು ಒದಗಿಸುತ್ತವೆ. ಸ್ವೀಕೃತ ನಂಬಿಕೆಯೊಂದು ಗಾದೆಯಾಗಿ ವ್ಯಕ್ತವಾಗಿರಬಹುದು. ಉದಾ :
ಸೀಟಗಾಲಿ ಇದ್ದ ಮನೆ ಹಾಳು, ದಾಟಗಾಲ ಇದ್ದ ತೋಟ ಹಾಳು. ಗಾದೆಯೊಂದು ಒಗಟಾಗುವ ಸಾಧ್ಯತೆಯೂ ಉಂಟು. 
ಚಿಕ್ಕಕ್ಕನಿಗೆ ಪುಕ್ಕುದ್ದ. ಕೆಲವು ಗಾದೆಗಳು ಕಥೆಗಳ ಬಾಲಗಳಾಗಿರುತ್ತವೆ. 
ದಪ್ಪ ತರ ದಾ, ಆದಂಗಾಯ್ತು ಚೂ. ಅನ್ಯೋಕ್ತಿಯನ್ನು ಹೋಲುವಂಥ ಗಾದೆಗಳು ವಿರಳ.

ಕೆಲವು ಗಾದೆಗಳು ಪೌರಾಣಿಕ ವಿಷಯವನ್ನು ಆಧರಿಸಿ ರಚನೆಯಾಗಿರುತ್ತವೆ. ಉದಾಹರಣೆಗೆ, ಪಕ್ಷ ಪಾಂಡವರಲ್ಲಿ, ಊಟ ಕೌರವರಲ್ಲಿ : ಅಂತು ಇಂತು ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲ - ಇತ್ಯಾದಿ. ಚಾರಿತ್ರಿಕ ಸಂದರ್ಭಗಳನ್ನು ಕುರಿತ ಗಾದೆಗಳೂ ಪ್ರಚಲಿತವಾಗಿವೆ. ಉದಾ : ಕೃಷ್ಣರಾಯ ಭೂಪ, ಮನೆಮನೆಗೆ ದೀಪ. ಕಾನೂನಿನ ಗಾದೆಗಳು ಕಾನೂನು ತತ್ತ್ವದ ಸಂಕ್ಷಿಪ್ತ ಹೇಳಿಕೆಗಳು. ವೈದ್ಯಕೀಯ ಗಾದೆಗಳು ಇನ್ನೊಂದು ಬಗೆಯವು. ಆರೋಗ್ಯವನ್ನು ಕುರಿತಾದ ಹಳೆಯ ನಿಯಮಗಳನ್ನು ಇವು ಹೇಳುತ್ತವೆ. ಹವಾಮಾನದ ಗಾದೆಗಳೂ ಸಾಂಪ್ರದಾಯಿಕವಾಗಿ ಬಂದಿವೆ. ಇವು ಋತುಮಾನಗಳ ವಿಷಯವನ್ನು ವ್ಯವಸಾಯ ವಿಷಯವನ್ನೂ ಕುರಿತು ಹೇಳುತ್ತವೆ. ಉದಾಹರಣೆಗೆ : ಅಶ್ವೀಜದಲ್ಲಿ ಹೊನ್ನು ಕರಗುವ ಬಿಸಿಲು, ಮಣ್ಣು ಕರಗುವ ಮಳೆ; ಅತ್ತದ ಮಳೆ ಎತ್ತಲಿಂದಾದರೂ ಬರುತ್ತದೆ; ರೋಹಿಣಿ ಮಳೆಯಲ್ಲಿ ಓಣಿಯೆಲ್ಲ ಜೋಳ, ಗೌರಿ ಹೊತ್ತಿಗೆ ಗಡಿಗೆ ಮುಳುಗಬೇಕು, ಇತ್ಯಾದಿ.

ಕೆಲವು ಸಾರಿ ಹೋಲಿಕೆಗಳೂ ಗಾದೆಗಳಾಗಬಹುದು. ಆದರೆ ಈ ಬಗೆಯ ಗಾದೆಗಳು ಕ್ರಮೇಣ ಜನಪ್ರಿಯತೆಯನ್ನು ಕಳೆದುಕೊಂಡು ಬಳಕೆಯಿಂದ ತಪ್ಪಿ ಹೋಗುವ ಸಾಧ್ಯತೆಯಿದೆ. ಸಂಪ್ರದಾಯದಲ್ಲಿ ಮತ್ತು ಸಾಹಿತ್ಯದಲ್ಲಿ ಕಂಡುಬರುವ ಅನೇಕ ಮಾತುಗಾರಿಕೆಗಳು ಗಾದೆಗಳಿಗೆ ಸಂಬಂಧಿಸಿವೆ. ಕೆಲವೊಮ್ಮೆ ಗಾದೆಗಳು ಮೊದಲೇ ಇದ್ದ ಮಾದರಿಗಳ ಮೇಲೆ ರಚಿತವಾಗಿರುತ್ತವೆ. ಗಾದೆಯ ಇನ್ನೊಂದು ವರ್ಗ ಕ್ಲೀಷೆಗಳು ಅಥವಾ ಚರ್ವಿತ ಚರ್ವಣಗಳು. ಇವು ಪುರ್ಣ ವಾಕ್ಯವಾಗಿರುವುದಕ್ಕಿಂಥ ಹೆಚ್ಚಾಗಿ ವಾಕ್ಯಾಂಗಗಳಾಗಿರುತ್ತವೆ. ವಂಶಲಾಂಛನಗಳನ್ನು ಕುರಿತ ಗಾದೆಗಳು ಮತ್ತೊಂದು ಬಗೆಯವು. ಇವು ಜನರ ಮತ್ತು ಸ್ಥಳಗಳ ಗುಣ ವಿವರಣೆ ಮಾಡುವ ಹೆಸರುಗಳು, ನುಡಿಗಟ್ಟುಗಳು.
ಗಾದೆಗಳ ಒಂದು ವಿಶೇಷತೆಯೆಂದರೆ, ಅವು ಆಧ್ಯಾತ್ಮಿಕ ಭೂಮಿಕೆಗೆ ಪ್ರವೇಶಿಸದೆ ಇರುವುದು. ಧರ್ಮಬೋದಕರ ಪ್ರವಚನಗಳಾಗಲಿ, ಉಪದೇಶಗಳಾಗಲಿ ಗಾದೆಗಳಾಗಿ ಪರಿವರ್ತಿತವಾಗುವುದಿಲ್ಲ. ಇವು ನೀತಿಯನ್ನೇನೋ ಹೇಳುತ್ತವೆ ನಿಜ; ಆದರೆ ಧಾರ್ಮಿಕ ಸಿದ್ಧಾಂತಗಳನ್ನಾಗಲಿ ವೇದಾಂತಪರ ವಿಚಾರಗಳನ್ನಾಗಲಿ ಒಳಗೊಂಡಿರುವುದಿಲ್ಲ. ಆದರೆ ಜನತೆ ಯಾವುದನ್ನು ಸತ್ಯವೆಂದು ಗೌರವಿಸಿದೆಯೋ ಅದಕ್ಕೆ ಸೂಚಿಯಾಗಿವೆ; ಲೋಕದಿಂದ ಪಡೆದುಕೊಂಡ ಅನುಭವದ ಒಟ್ಟು ಮೊತ್ತವಾಗಿದೆ.
ಈಗ ಗಾದೆಗಳ ಸಾಮ್ಯ ಮತ್ತು ಸಾರ್ವತ್ರಿಕತೆ, ಸಮಾನ ಗಾದೆಗಳು ಜಗತ್ತಿನ ಎಲ್ಲಾ ಭಾಷೆಗಳಲ್ಲಿಯೂ ಕಾಣಸಿಗುತ್ತವೆ. ಭಾಷೆ ಬೇರೆಯಾದರೂ ಭಾಷಿತ ಒಂದೇ ಇದಕ್ಕೆ ಕಾರಣವನ್ನು ಹುಡುಕುತ್ತ ಕೆಲವರು, ಅವನ್ನು ಅಂತಾರಾಷ್ಟ್ರೀಯ ಅಲೆಮಾರಿ ಎಂದು ಕರೆದರು. ಗಾದೆಗಳು ಪ್ರಯಾಣ ಮಾಡುತ್ತವೆ ಎಂಬುದು ಇದರ ಅರ್ಥ. ಗಾದೆಗಳ ದೇಶಾತೀತ ಭಾಷಾತೀತ ಲಕ್ಷಣಕ್ಕೆ ಈ ವಿವರಣೆ ಸಮಂಜಸವೆಂದು ತೋರಲಾರದು. ಮೂಲಭೂತವಾಗಿ ಮಾನವರೆಲ್ಲ ಒಂದೇ ರೀತಿ ಆಲೋಚಿಸು ತ್ತಾರೆಂಬುದು ಇದಕ್ಕೆ ಕಾರಣವಿರಬೇಕೆಂದು ತೋರುತ್ತದೆ. ಮೂಲಪ್ರವೃತ್ತಿಗಳಾದ ಪ್ರೀತಿ, ಹಸಿವು, ಭಯಗಳು ಅಸಂಸ್ಕೃತ ಸುಸಂಸ್ಕೃತರೆನ್ನದೆ ಸಮಾನವಾಗಿರುವ ವಿಷಯಗಳು-ಈ ಪ್ರವೃತ್ತಿಗಳನ್ನು ನಾಗರಿಕತೆಗಳಾಗಲಿ, ವಾತಾವರಣಗಳಾಗಲಿ ನಿವಾರಿಸಲಾರವು, ಮಾರ್ಪಡಿಸಲಾರವು, ಆದ್ದರಿಂದ ಗಾದೆಯ ಜ್ಞಾನ ಜಗತ್ತಿನಲ್ಲೆಲ್ಲ ಒಂದೆಯೇ ಭಿನ್ನತೆಯೇ ನಿದ್ದರೂ ಅದರ ಪ್ರಕಟಣೆಯಲ್ಲಿ. ಹೀಗೆ ಗಾದೆಯ ಸಾಮ್ಯತೆ ಮತ್ತು ಸಾರ್ವತ್ರಿಕತೆಗೆ ಸ್ವತಂತ್ರ ಮೂಲ ಸಿದ್ಧಾಂತವನ್ನು ಕಾರಣವಾಗಿ ಕೊಡಬಹುದು. ಇಷ್ಟಾದರೂ ಗಾದೆಗಳನ್ನು ಸ್ವೀಕರಣ ಮಾಡಿಕೊಂಡಿರುವ ಉದಾಹರಣೆಗಳನ್ನು ತೆಗೆದು ಹಾಕುವಂತಿಲ್ಲ. ದೇಶಗಳ ಆಕ್ರಮಣ, ಅಂತರ್ಜಾತಿ ವಿವಾಹ, ರಾಜಕೀಯ ಸಾಂಸ್ಕೃತಿಕ ಸಂಬಂಧ ಮೊದಲಾದವುಗಳಿಂದ ಗಾದೆ ದೇಶದಿಂದ ದೇಶಕ್ಕೆ ಹೋಗಿರಲು ಸಾಧ್ಯವಿದೆ.
ಗಾದೆಯ ಉಗಮವನ್ನು ಕುರಿತು ನಿರ್ದಿಷ್ಟವಾಗಿ ಹೇಳಲಾಗದು. ಇದು ಜನಪದ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದುದು. ಸಮಾಜದಷ್ಟು ಹಳೆಯದು. ಒಂದು ಕಡೆ ಗಾದೆ ಯಾರೊಬ್ಬ ಜನ್ಮದಾತನೂ ಇಲ್ಲದೆ ಕ್ರಮೇಣ ಜನತೆಯ ನಡುವೆ, ಜನತೆಯದಾಗಿ ವಿಕಾಸವಾದುದಾಗಿರಬೇಕು. ಇನ್ನೊಂದು ಕಡೆ, ಸುತ್ತಮುತ್ತಲ ಜಗತ್ತಿನೊಡನೆ ಸಂಪರ್ಕ ಕಲ್ಪಿಸಿಕೊಳ್ಳುವಾಗ ಸಂದರ್ಭ ಸೂತ್ರವಾಗಿ ಬುದ್ದಿವಂತನೊಬ್ಬನಿಂದ ಜಿಗಿದಿರಬೇಕು. ಹಲವರ ಅನ್ನಿಸಿಕೆ ಜ್ಞಾನಾನುಭವಗಳು ಒಬ್ಬನ ಸೃಷ್ಟಿವಿವೇಕದಲ್ಲಿ ಮೂಡಿ ಗಾದೆಯಾಯಿತು. ಆದರೆ ಸಂಪ್ರದಾಯ ಇದನ್ನು ಕೈಗೆತ್ತಿಕೊಳ್ಳುವ ತನಕ ಇದು ಕೇವಲ ವಸ್ತುಸ್ಥಿತಿಯೊಂದರ ಸೂತ್ರಮಯ ಹೇಳಿಕೆಯಾಗಿತ್ತು ಅಥವಾ ಬೋಧಪ್ರದ ದೃಷ್ಟಾಂತವಾಗಿತ್ತು. ಸಂಪ್ರದಾಯ ಸ್ವೀಕರಿಸಿದಾಗ, ಅನುಕರಿಸಲಾಗದ ರೀತಿಯಲ್ಲಿ ಅದನ್ನು ಹೊಂದಿಸಿಕೊಂಡಿತು, ಮಾರ್ಪಡಿಸಿಕೊಂಡಿತು. ಆದ್ದರಿಂದ ಸೃಷ್ಟಿ ಮತ್ತು ಸ್ವೀಕಾರಗಳೆರಡೂ ಗಾದೆಯೊಂದು ರೂಪ ತಾಳುವುದಕ್ಕೆ ಅವಶ್ಯಾಂಶಗಳಾಗುತ್ತದೆ. ಈ ಕ್ರಿಯೆಯಲ್ಲಿ ಮೂಲ ಮರೆತುಹೋಗುತ್ತದೆ. ಒಂದೇ ವಸ್ತು ಹಾಗೂ ಒಂದೇ ಸೂತ್ರರೂಪ ಒಬ್ಬನಿಗಿಂತ ಹೆಚ್ಚಿನವರಲ್ಲಿ ದೊರೆಯುವುದರಿಂದ ಗಾದೆಗಳ ಮೂಲ ತೊಡಕಾಗಿದೆ. ಆದ್ದರಿಂದ ವೈಯಕ್ತಿಕತೆಯನ್ನು ಒಟ್ಟುಗೂಡಿಸಿಕೊಂಡ ಸಾಮೂಹಿಕ ಸೃಷ್ಟಿ ಇದೆಂದು ಹೇಳಬಹುದಾಗಿದೆ. ಹೀಗೆ ಗಾದೆ ಸಮಷ್ಟಿಯ ಸ್ವತ್ತಾದ ಮೇಲೆ, ಅದು ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಬೆಳೆಯಿತು. ಉಳಿಯಿತು. ಈ ರೀತಿ ಪ್ರಯಾಣ ಮಾಡುವಾಗ ಗಾದೆ ಹರಿತವಾಯಿತು, ರೂಪಾಂತರಗಳನ್ನು ಪಡೆಯಿತು. ಸಾರ್ವತ್ರಿಕ ಜನಪ್ರಿಯತೆಯ ಮುದ್ರೆಯೊಂದು ಅದರ ಮೇಲೆ ಬಿತ್ತು.

ಗಾದೆಗಳು ವ್ಯಕ್ತಿಯೊಬ್ಬನಿಂದ ರಚಿತವಾಗಿದ್ದು, ಅವನ ಆಲೋಚನೆಗಳು ಬರೆವಣಿಗೆಯಲ್ಲಿ ದೊರೆತರೆ, ಆಗ ಕೆಲವೇಳೆ ಮೂಲವನ್ನು ಹುಡುಕಲು ಸಾಧ್ಯವಾಗುತ್ತದೆ. ಬೈಬಲ್, ವೇದ, ಉಪನಿಷತ್ತು, ಧಮ್ಮಪದ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ, ಮಹಾ ಕವಿಗಳ ಕಾವ್ಯಗಳಲ್ಲಿ ಇವು ಕಾಣಬರುವುದಾದರೂ ಸಾಹಿತ್ಯಿಕ ದಾಖಲೆಗೆ ಇಳಿಯುವ ಮುನ್ನ ಇವು ವಾಕ್ಸಂಪ್ರದಾಯದಲ್ಲಿರಲಿಲ್ಲವೆಂದು ಹೇಳಲು ಹೇಗೆ ಸಾಧ್ಯ. ಆ ಕಾಲದಲ್ಲಿ ಪ್ರಚಲಿತವಿದ್ದ ಗಾದೆಗಳು ಹಲಕೆಲವು ಮಾರ್ಪಾಡುಗಳೊಡನೆ ಸಾಹಿತ್ಯದಲ್ಲಿ ಸೇರಿಕೊಂಡಿರಬಹುದು. ಯಾವುದೇ ಸಂದರ್ಭದಲ್ಲಿ ಜನಪ್ರಿಯ ಹಾಗೂ ಸಾಹಿತ್ಯಿಕ ಮೂಲಗಳೆರಡೂ ಬೆಳೆವಣಿಗೆಯ ಹಂತಗಳಲ್ಲಿ ಬೆರೆಯುತ್ತವೆ. ಇದರಿಂದಾಗಿ ಗಾದೆಯೊಂದರ ನಿರ್ದಿಷ್ಟ ಕರ್ತೃತ್ವ ಗೊತ್ತಾಗುವುದಿಲ್ಲ.
ಗಾದೆಗಳ ಅಸ್ತಿತ್ವ ಮತ್ತು ಉಪಯೋಗ ಪ್ರಾಚೀನ ಕಾಲದಿಂದಲೂ ಕಾಣಬರುತ್ತದೆ. ಪ್ರಾಚೀನ ಸಾಹಿತ್ಯ ಗ್ರಂಥಗಳಲ್ಲಿ, ಧರ್ಮಗ್ರಂಥಗಳಲ್ಲಿ, ಚರಿತ್ರ ಲೇಖನಗಳಲ್ಲಿ ಇವು ದೊರೆಯುತ್ತವೆ. ಬರೆದಿರಿಸಿದ ನ್ಯಾಯಶಾಸ್ತ್ರಗಳಿಲ್ಲದ ಜನತೆಗಳಲ್ಲಿ ಅವರ ವ್ಯಾಜ್ಯಗಳ ಮೇಲೆ ಪರಿಣಾಮವನ್ನುಂಟುಮಾಡುವಂತೆ ಗಾದೆಗಳನ್ನು ಉದಾಹರಿಸಲಾಗುತ್ತದೆ. ಸಂದರ್ಭೋಚಿತವಾಗಿ ಉಪಯೋಗಿಸಿದ ಗಾದೆಯೊಂದು ನ್ಯಾಯವೊಂದರ ತೀರ್ಮಾನಕ್ಕೆ ಕಾರಣವಾಗಬಹುದು ಅಥವಾ ಪ್ರಮುಖ ನಿರ್ಣಯವೊಂದಕ್ಕೆ ನೆರವಾಗ ಬಹುದು. ಕೆಲವು ಆಫ್ರಿಕನ್ ಸಮಾಜಗಳಲ್ಲಿ ನಿರ್ಣಯ ಕೈಗೊಳ್ಳುವಾಗ ಜನ ಸಾಂಪ್ರದಾಯಿಕವಾಗಿ ಗಾದೆಗಳನ್ನು ಪಠಿಸುತ್ತಾರಂತೆ.

ಭಾರತೀಯ ವೈದಿಕ ಬರೆಹಗಳು ತತ್ತ್ವಶಾಸ್ತ್ರೀಯ ಭಾವನೆಗಳನ್ನು ಪ್ರತಿಪಾದಿಸಲು ಗಾದೆಗಳನ್ನು ಬಳಸುತ್ತಿದ್ದವು. ಪ್ರಾಚೀನ ಚೀನದಲ್ಲಿ ನೈತಿಕ ಶಿಕ್ಷಣಕ್ಕಾಗಿ ಗಾದೆಗಳನ್ನು ಉಪಯೋಗಿಸುತ್ತಿದ್ದವು. ಇಂಗ್ಲೆಂಡಿನಲ್ಲಿ ಲ್ಯಾಟಿನ್ ಬೋಧಿಸಲು ಗಾದೆಗಳನ್ನು ಬಳಸುತ್ತಿದ್ದರು. ಭಾಷಣಕಲೆಯಲ್ಲಿ ಮಾತಿಗೆ ಅಲಂಕಾರ ಕಟ್ಟಲು ಗಾದೆಗಳನ್ನು ಬಳಸುವುದುಂಟು. ಮಧ್ಯಕಾಲೀನ ಪಠ್ಯಗಳು ಮತ್ತು ಅರಿಸ್ಟಾಟಲ್ ಇದಕ್ಕೆ ನಿದರ್ಶನ. ಗಾದೆಗಳಲ್ಲಿ ಸಂವಾದವನ್ನು ಬರೆದವರಿದ್ದಾರೆ, ಸಾನೆಟ್ಟನ್ನು ರಚಿಸಿದವರಿದ್ದಾರೆ. 16ನೆಯ ಶತಮಾನದಲ್ಲಿ ಇಂಗ್ಲೆಂಡಿನ ಪ್ರಜಾಪ್ರತಿನಿಧಿ ಸಭೆಯಲ್ಲಿ ಗಾದೆಯ ಭಾಷಣವೊಂದು ನಡೆದಿತ್ತಂತೆ. ಗಾದೆಗಳನ್ನು ಶಿರೋನಾಮೆಗಳಾಗಿ, ಆಡುಭಾಷೆಯ ವಾತಾವರಣವನ್ನು ಕೊಡುವುದಕ್ಕಾಗಿ ಬಳಸಲಾಗಿದೆ. ಹೀಗೆ ಹಲವು ರೀತಿಯಲ್ಲಿ ಗಾದೆಗಳ ಉಪಯೋಗ ಆಗಿದೆ.

ಗಾದೆ ಜ್ಞಾನದ ಅನಂತ ಆಕಾಶವನ್ನು ನಿಂತಲ್ಲಿಯೇ ನೋಡಬಲ್ಲ ನೀತಿ ನಿರ್ಣಯಗಳ ದೂರದರ್ಶಕ. ಇದರಲ್ಲಿ ಎದ್ದುಕಾಣುವುದು ಜನಸಾಮಾನ್ಯರ ಸಾಮಾನ್ಯ ಜ್ಞಾನ. ಜೀವನದ ನಾನಾ ಭಾಗಗಳಲ್ಲಿ ಅವರಿಗಿರುವ ಜ್ಞಾನಾನುಭವಗಳನ್ನು ಇಲ್ಲಿ ವಿವೇಕದ ಒರೆಗಲ್ಲಿಗೆ ಹಚ್ಚಿ ನೋಡಿದೆ. ಗಾದೆ ಸಾಮಾನ್ಯ ಜನತೆಯ ವೇದ, ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ. ವೇದ ಕೆಲವರ ಮಾತು, ಗಾದೆ ಹಲವರ ನುಡಿ. ಇಂಗ್ಲಿಷ್ ಗಾದೆಯೊಂದು ಹೇಳುವ ಹಾಗೆ ಕೆಲವರು ಹೇಳುವುದು ನಿಜವಾಗಬಹುದು, ಆದರೆ ಎಲ್ಲರೂ ಹೇಳುವುದು ನಿಜವಾಗೇ ಆಗುತ್ತದೆ.
ಗಾದೆಗಳು ಜನಪ್ರಿಯ ಅಭಿಪ್ರಾಯದ ಮೇಲೆ ಸೂಕ್ಷ್ಮವೂ ವ್ಯಾಪಕವೂ ಆದ ಪ್ರಭಾವವನ್ನು ಹೊಂದಿರುತ್ತದೆ. ಇವುಗಳ ಸೃಷ್ಟಿಗೆ ಹಾಗೂ ಪ್ರಸಾರಕ್ಕೆ ಕಾರಣರಾದ ಜನರ ಸಾಮಾಜಿಕ, ರಾಜಕೀಯ, ನೈತಿಕ ಹಾಗೂ ಧಾರ್ಮಿಕ ಆದರ್ಶಗಳಿಗೆ ನಂಬಲರ್ಹವಾದ ಸಾಕ್ಷ್ಯಗಳಾಗಿವೆ. ಗಾದೆಗಳ ಮೌಲ್ಯ ಮತ್ತು ಮಹತ್ತ್ವವನ್ನು ಈ ಮಾತುಗಳು ತಿಳಿಸುತ್ತವೆ.
ಕನ್ನಡದಲ್ಲಿ ಗಾದೆಗಳು : ಕನ್ನಡದಲ್ಲಿ ಗಾದೆಗಳ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಕೆಲಸ ನಡೆದಿದೆ. ಇದಕ್ಕೆ ಏನಿಲ್ಲವೆಂದರೂ ನೂರು ವರ್ಷಗಳ ಇತಿಹಾಸವಿದೆ. ಈ ಕ್ಷೇತ್ರದಲ್ಲಿಯೂ ಮೊದಲು ಕೆಲಸ ಮಾಡಿದವರು ಕ್ರೈಸ್ತ ಮಿಷನರಿಗಳೇ. 1894ರಲ್ಲಿ ಪ್ರಕಟವಾದ ಕಿಟ್ಟೆಲ್ ಅವರ ಶಬ್ದಕೋಶದಲ್ಲಿಯೇ ಅಪಾರ ಸಂಖ್ಯೆಯ ಗಾದೆಗಳನ್ನು ಕಾಣುತ್ತೇವೆ. ಈ ಎಲ್ಲ ಗಾದೆಗಳನ್ನು ಒಂದು ಕಡೆ ಕಲೆಹಾಕಿ ಕಿಟ್ಟೆಲ್ ಕೋಶದ ಗಾದೆಗಳು ಎಂಬ ಹೆಸರಿನಲ್ಲಿ ರಾಗೌ ಹೊರತಂದಿದ್ದಾರೆ. ಇದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಗಾದೆಗಳಿರುವ ವಿಷಯ ಗೊತ್ತಾಗುತ್ತದೆ. ಒಂದು ಶತಕದ ಹಿಂದೆಯೇ ಕಿಟ್ಟೆಲ್ ಅವರು ಕರ್ಣಾಟಕದ ನಾನಾ ಭಾಗಗಳಿಂದ ಗಾದೆಗಳನ್ನು ಸಂಗ್ರಹಿಸಿದ್ದರೆಂಬುದು ಗಮನಾರ್ಹ ಸಂಗತಿ. ಅವರು ತಮ್ಮ ಅರ್ಥಕೋಶದ ಗ್ರಾಮ್ಯಶಬ್ದಗಳ ಅರ್ಥ ಸ್ಪಷ್ಟೀಕರಣಕ್ಕಾಗಿ ಈ ಗಾದೆಗಳನ್ನು ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಅವರ ಸಂಗ್ರಹ ಬಹಳ ಮಹÀತ್ತ್ವದ್ದಾಗಿದೆ ಮತ್ತು ಅದಕ್ಕೆ ವಿಶೇಷ ಐತಿಹಾಸಿಕ ಮೌಲ್ಯವಿದೆ. ಇದರ ತರವಾಯ ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ಸಿನವರು ಕರ್ಣಾಟಕ ಲೋಕೋಕ್ತಿನಿಧಾನ ಎಂಬ ಗ್ರಂಥವೊಂದನ್ನು 1912ರಲ್ಲಿ ಪ್ರಕಟಿಸಿದರು. ಪುಸ್ತಕರೂಪದಲ್ಲಿ ಪ್ರಕಟವಾದ ಗಾದೆಗಳ ಸಂಕಲಗಳಲ್ಲಿ ಇದು ಮೊದಲನೆಯದು. 1919ರಲ್ಲಿ ಮರುಮುದ್ರಣವನ್ನು ಕಂಡ ಇದು ಈಗ ದೊರೆಯದಾಗಿದೆ. ಇದರಲ್ಲಿ 1500 ರೂಢಿಯ ಗಾದೆಗಳಿದ್ದು, ಕೆಲವಕ್ಕೆ ಜೊತೆಯಲ್ಲಿಯೇ ಅರ್ಥವಿವರಣೆಯನ್ನೂ ಕೊಡಲಾಗಿದೆ.

ಇದರ ಅನಂತರ ಪ್ರಕಟವಾದ ಪ್ರಮುಖ ಸಂಗ್ರಹವೆಂದರೆ ಎಚ್.ಎಸ್.ಅಚ್ಚಪ್ಪನವರ ಕನ್ನಡ ಗಾದೆಗಳು. 1944ರಲ್ಲಿ ಪ್ರಕಟವಾದ ಈ ಕೃತಿ 1959ರಲ್ಲಿ ಎರಡನೆಯ ಮುದ್ರಣವನ್ನೂ ಕಂಡಿತು. ಇದೊಂದು ಉತ್ತಮ ಸಂಕಲನವಾಗಿದ್ದು, ಜನಪ್ರಿಯವಾಗಿದೆ. ಗಾದೆಗಳ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡ ಅಚ್ಚಪ್ಪನವರು 1969ರಲ್ಲಿ ಗ್ರಂಥಸ್ಥ ಗಾದೆಗಳು ಎಂಬ ಗಾದೆಗಳ ಬೃಹತ್ಕೋಶವೊಂದನ್ನು ಹೊರತಂದಿದ್ದಾರೆ. ಕನ್ನಡ ಪ್ರಸಿದ್ಧ ಕವಿಗಳ ಕಾವ್ಯಗಳಲ್ಲಿ ಉಕ್ತವಾಗಿರುವ ಎಲ್ಲ ಗಾದೆಗಳನ್ನೂ ಒಂದು ಕಡೆ ಕಲೆಹಾಕುವ ಕಾರ್ಯ ಇಲ್ಲಿ ನಡೆದಿದೆ. ನೃಪತುಂಗನ ಕವಿರಾಜಮಾರ್ಗದಿಂದ ಮುದ್ದಣನ ಶ್ರೀರಾಮ ಪಟ್ಟಾಭಿಷೇಕದವರೆಗಿನ ಗಾದೆಗಳು ಇಲ್ಲಿ ಸಂಕಲನಗೊಂಡಿವೆ. ಇದರಲ್ಲಿ ಅನುಸರಿಸಿರುವ ಕ್ರಮವೆಂದರೆ, ಕವಿ-ಕಾವ್ಯಾದಿ ಆಕರವನ್ನು ಕೊಟ್ಟು, ಅದರಲ್ಲಿ ಬಂದಿರುವ ಗಾದೆಗಳನ್ನು ಅಕಾರಾದಿಯಾಗಿ ಪಟ್ಟಿ ಮಾಡಿರುವುದು. ಕೆಲವೊಮ್ಮೆ ಗಾದೆಗಳಂತೆ ತೋರುವ ಉದ್ಧರಣೆಗಳು, ಸಾಮತಿಗಳು, ಜಾಣ್ಣುಡಿಗಳು, ಸೂಕ್ತಿಗಳು, ರೂಪಕಗಳು ಮುಂತಾದವೂ ಇಲ್ಲಿ ಸೇರಿಹೋಗಿವೆ. ಜನಪದದಿಂದ ಕವಿಕೃತಿಗಳಿಗೆ ಹೋಗಿ ನೆಲೆಗೊಂಡಿರುವ ಶುದ್ಧ ಗಾದೆಗಳನ್ನು ಮಾತ್ರ ಆಯ್ದುಕೊಂಡಿದ್ದರೆ ಚೆನ್ನಾಗಿರುತ್ತಿತೇನೋ ಎನಿಸುತ್ತದೆ. ಆದರೂ ಇದೊಂದು ಉಪಯುಕ್ತವೂ ಉತ್ತಮವೂ ಆದ ಕೆಲಸವೆನ್ನುವುದರಲ್ಲಿ ಸಂಶಯವಿಲ್ಲ. ಗ್ರಂಥದ ಕಡೆಯಲ್ಲಿ ಕೊಟ್ಟಿರುವ ಶಬ್ದಕೋಶವೊಂದು ಉಪಯುಕ್ತ ಭಾಗ.

ಮುಂದಿನ ಗಮನಾರ್ಹ ಕೃತಿಯೆಂದರೆ 1959ರಲ್ಲಿ ಪ್ರಕಟವಾದ ಜಂಗಮಕೋಟಿ ಕೃಷ್ಣಶಾಸ್ತ್ರಿ ಅವರ ಗಾದೆಗಳ ಭಂಡಾರ ಭಾಗ 1 ಎಂಬ ಸಂಕಲನ. ಇದು ಬೆಂಗಳೂರಿನ ಸತ್ಯಶೋಧನ ಪ್ರಕಟನ ಮಂದಿರದಿಂದ ಪ್ರಕಾಶನಗೊಂಡಿದೆ. ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗಾದೆಗಳಿದ್ದು, ಅವನ್ನು ವಿಷಯಾನುಸಾರವಾಗಿ ವಿಂಗಡಿಸಿ ಅಕಾರಾದಿಯಾಗಿ ಕೊಡಲಾಗಿದೆ. ಈ ವಿಂಗಡಣೆ ಸಮಂಜಸವಾಗಿದೆಯೆಂದು ಹೇಳಲಾಗುವುದಿಲ್ಲ. ಕೆಲವು ಗಾದೆಗಳಿಗೆ ಅಡಿ ಟಿಪ್ಪಣಿಯಲ್ಲಿ ಅರ್ಥವನ್ನೂ ವಿವರಣೆಯನ್ನೂ ನೀಡಿದ್ದಾರೆ. ಸಂಸ್ಕೃತದ ನೂರಾರು ಗಾದೆಗಳನ್ನು ಕನ್ನಡದ ಅನುವಾದದೊಡನೆ ಸೇರಿಸಲಾ¬ತು ಎಂದಿದ್ದಾರೆ.

ಈ ಸಂದರ್ಭದಲ್ಲಿ ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಆಶ್ರಯದಲ್ಲಿ 1962ರಲ್ಲಿ ಪ್ರಕಟವಾದ ನಾಲ್ನುಡಿ - ನಾಣ್ಣುಡಿ ಎಂಬ ಗ್ರಂಥವನ್ನು ಅಗತ್ಯವಾಗಿ ನೆನೆಯಬೇಕು. ಕನ್ನಡ, ತೆಲುಗು, ತಮಿಳು, ಮಲಯಾಳ ಭಾಷೆಗಳಲ್ಲಿನ 467 ಸಮಾನ ಗಾದೆಗಳು ಇಲ್ಲಿ ಸಂಗ್ರಹಗೊಂಡಿವೆ. ಇದರ ಸಂಪಾದಕರಲ್ಲಿ ಕನ್ನಡವನ್ನು ಪ್ರತಿನಿಧಿಸಿ ಎಂ.ಮರಿಯಪ್ಪ ಭಟ್ಟರಿದ್ದಾರೆ. ಎನ್.ವೆಂಕಟರಾವ್, ಆರ್.ಪಿ.ಸೇತುಪಿಳ್ಳೆ ಮತ್ತು ಎಸ್.ಕೆ.ನಾಯಕ್ ಅವರು ಉಳಿದ ಭಾಷೆಗಳ ಪ್ರತಿನಿಧಿಗಳಾಗಿದ್ದಾರೆ. ದ್ರಾವಿಡ ಭಾಷೆಗಳ ಗಾದೆಗಳ ತೌಲನಿಕ ಅಧ್ಯಯನಕ್ಕೆ ಈ ಗ್ರಂಥ ಸಾಮಗ್ರಿ ಒದಗಿಸುತ್ತದೆ.

1963ರಲ್ಲಿ ಪ್ರಕಟವಾದ ಟಿ.ವಿ.ವೆಂಕಟರಮಣಯ್ಯನವರ ಕನ್ನಡ ಗಾದೆಗಳ ಕೋಶ ಒಂದು ಉಲ್ಲೇಖನೀಯ ಕೃತಿಯಾಗಿದೆ. ಇದರ ಪರಿಷ್ಕೃತ ಹಾಗೂ ವಿಸ್ತೃತ ಆವೃತ್ತಿ 1969ರಲ್ಲಿ ಪ್ರಕಟಗೊಂಡಿದೆ. ಮೊದಲ ಮುದ್ರಣದಲ್ಲಿದ್ದ ಗಾದೆಗಳು ನಾಲ್ಕು ಸಾವಿರವಾದರೆ, ಎರಡನೆಯ ಮುದ್ರಣದಲ್ಲಿ ಎಂಟು ಸಾವಿರಕ್ಕೂ ಹೆಚ್ಚಿವೆ. ಈಗಾಗಲೇ ಪ್ರಕಟವಾಗಿದ್ದ ಹಲವಾರು ಗಾದೆಗಳು ಇಲ್ಲಿ ಮತ್ತೆ ಪುನರಾವರ್ತನಗೊಂಡಿವೆ. ಕನ್ನಡ ಕವಿಗಳ ಕಾವ್ಯಗಳಿಂದ ತೆಗೆದ ಗಾದೆಗಳೂ ಸಂಸ್ಕೃತದ ಗಾದೆಗಳೂ ಕೆಲವು ಸೇರಿವೆ. ಗಾದೆಗಳನ್ನು ವಿಷಯಾನುಸಾರವಾಗಿ ವಿಭಾಗಿಸಿದ್ದರೂ ಸಮರ್ಪಕವೆನಿಸುವಂತಿಲ್ಲ. ಮೊಟ್ಟಮೊದಲಿಗೆ ಪ್ರಕಟವಾದ ಗಾದೆಗಳೂ ಇಲ್ಲಿರುವುದರಿಂದ ಇದೊಂದು ಗಮನಾರ್ಹ ಕೃತಿಯಾಗಿದೆ. ಇದಲ್ಲದೆ ಗ್ರಂಥದ ಕಡೆಯಲ್ಲಿ ಕೆಲವು ಸಮಾನಾರ್ಥಕ ಕನ್ನಡ - ಇಂಗ್ಲೀಷ್ ಗಾದೆಗಳನ್ನು ಕೊಟ್ಟಿರುವುದು ಉಪಯುಕ್ತವಾಗಿದೆ.

ಇಲ್ಲಿ ಹೇಳಬೇಕಾದ ಮತ್ತೊಂದು ಗಾದೆಗಳ ಸಂಗ್ರಹವೆಂದರೆ ರಾಗೌ ಅವರ ನಮ್ಮ ಗಾದೆಗಳು. ಇದು 1968ರಲ್ಲಿ ಪ್ರಕಟಗೊಂಡಿತು. ಇದರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗಾದೆಗಳಿದ್ದು ಅವೆಲ್ಲ ಮೊದಲಬಾರಿಗೆ ಪ್ರಕಟವಾಗಿವೆ. ಇಲ್ಲಿಯ ಗಾದೆಗಳೆಲ್ಲ ಪ್ರಾದೇಶಿಕ ಸ್ವರೂಪದವು. ಕೆಲವು ಗಾದೆಗಳು ಪುನರುಕ್ತವಾದಂತೆ ಕಂಡರೂ ಪಾಠಾಂತರ ಅಥವಾ ವಿಶೇಷ ಪದಪ್ರಯೋಗ ಅಥವಾ ಧ್ವನಿಹೆಚ್ಚಳ ಅಥವಾ ಗಾದೆಯ ಪುರ್ಣರೂಪಕ್ಕಾಗಿ ಅಂಥವನ್ನು ಉಳಿಸಿಕೊಳ್ಳಲಾಗಿದೆ. ಈ ಕೃತಿಯ ಇನ್ನೆರಡು ಆಕರ್ಷಣೆಗಳೆಂದರೆ ಪ್ರಸ್ತಾವನೆ ಮತ್ತು ಅರ್ಥಕೋಶಗಳು. ಗಾದೆಯ ಸ್ವರೂಪ ಲಕ್ಷಣ, ಉಗಮ ವಿಕಾಸ, ಸಾಹಿತ್ಯಮೌಲ್ಯ ಮುಂತಾದ ವಿಷಯಗಳನ್ನು ಕುರಿತ ಪ್ರಸ್ತಾವನೆ ತುಂಬ ಉಪಯುಕ್ತವೆನಿಸಿದೆ.
1971ರಲ್ಲಿ ಪ್ರಕಟವಾದ ಬಿ.ಎ.ವಿವೇಕ ರೈ ಅವರ ತುಳು ಗಾದೆಗಳು ಇಲ್ಲಿ ಗಮನಿಸಬೇಕಾದ ಮತ್ತೊಂದು ಗ್ರಂಥ. ಇದರಲ್ಲಿ 704 ತುಳು ಗಾದೆಗಳಿವೆ. ಪ್ರತಿಯೊಂದು ಗಾದೆಯನ್ನೂ ಕನ್ನಡ ಲಿಪಿಯಲ್ಲಿ ಕೊಟ್ಟು, ಅದರ ಕನ್ನಡಾನುವಾದವನ್ನು, ದೊರೆತಾಗ ಕನ್ನಡ ಸಮಾನ ಗಾದೆಗಳನ್ನು ಕೆಳಗಡೆ ಕೊಡುತ್ತಾರೆ. ಅಗತ್ಯ ಬಿದ್ದಲ್ಲಿ ಗಾದೆಗಳಿಗೆ ಹಿನ್ನೆಲೆ ಹಾಗೂ ವಿವರಣೆಗಳನ್ನೂ ನೀಡಿದ್ದಾರೆ. ಗಾದೆಗಳಿಗೆ ಬರೆದಿರುವ ಅಭ್ಯಾಸಪುರ್ಣ ಪ್ರಸ್ತಾವನೆ, ಕೊಟ್ಟಿರುವ ತುಳು - ಕನ್ನಡ ಅರ್ಥಕೋಶ ಈ ಪುಸ್ತಕದ ಉಪಯುಕ್ತತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಸಂದರ್ಭದಲ್ಲಿ ಸ್ವತಂತ್ರ್ಯಗಾದೆಗಳ ರಚನೆಯನ್ನು ಕುರಿತು ಕೆಲವು ಮಾತುಗಳನ್ನು ಬರೆಯಬಹುದು. ಕನ್ನಡದಲ್ಲಿ ಕೆಲವರು ಸ್ವಂತ ಗಾದೆಗಳನ್ನು ರಚಿಸಿರುವ ನಿದರ್ಶನಗಳಿವೆ. ಕೊರವಂಜಿ ಪತ್ರಿಕೆಯಲ್ಲಿ ಬಂದ ನಾ. ಕಸ್ತೂರಿಯವರ ಸಾವಿರಾರು ಹೊಸ ಗಾದೆಗಳನ್ನು ಇಲ್ಲಿ ನೆನೆಯಬಹುದು. ಸಮಾಜದ ಕುಂದು ಕೊರತೆಗಳನ್ನು ವಿಡಂಬಿಸುವುದರಲ್ಲಿ ಇವು ಪರಿಣಾಮಕಾರಿಯಾದವು. ಇತ್ತೀಚೆಗೆ ಎರಡು ಸ್ವತಂತ್ರ್ಯ ಗಾದೆಗಳ ಸಂಕಲನಗಳು ಪ್ರಕಟಗೊಂಡಿವೆ. ಅವುಗಳಲ್ಲಿ 1969ರಲ್ಲಿ ಪ್ರಕಟವಾದ ಎಸ್. ವಿ. ಪರಮೇಶ್ವರಭಟ್ಟರ ಮಂಥನ ಒಂದು. ಇದರಲ್ಲಿ ಏಳುನೂರು ಹೊಸಗಾದೆಗಳಿವೆ. ಎಷ್ಟೋ ರೂಢಿಯ ಗಾದೆಗಳು ತಮ್ಮ ಮೂಲ ರೂಪದಲ್ಲಿಯೋ ಅಥವಾ ಅಲ್ಪಸ್ವಲ್ಪ ಬದಲಾವಣೆ ಹೊಂದಿಯೋ ಇಲ್ಲಿ ಬಂದು ಸೇರಿಕೊಂಡಿವೆ. ಕೆಲವು ಗಾದೆಗಳಂತೂ ಮೊದಲೆ ಜನಪದದಲ್ಲಿ ಇದ್ದ ಗಾದೆಗಳ ಸಾದೃಶ್ಯದ ಮೇಲೆ ರಚಿತವಾದವು. ತೀರ ಹೊಸದೆನ್ನುವ ಗಾದೆಗಳೂ ಇಲ್ಲಿವೆ. ಈ ಎಲ್ಲ ಗಾದೆಗಳೂ ರೂಪ ಮತ್ತು ಶೈಲಿಗಳಲ್ಲಿ ಜನಪದ ಗಾದೆಗಳಂತೆಯೇ ಇವೆ; ಆದರೆ ವಸ್ತುವಿಷಯದಲ್ಲಿ ಕೆಲಮಟ್ಟಿಗೆ ಬೇರೆಯಾಗಿವೆ, ಆಧುನಿಕವಾಗಿವೆ. ಈ ಬಗೆಯ ಇನ್ನೊಂದು ಸಂಕಲನವೆಂದರೆ 1970ರಲ್ಲಿ ಪ್ರಕಟವಾದ ಎಚ್.ಜೆ.ಲಕ್ಕಪ್ಪಗೌಡರ ಇಬ್ಬನಿ. ಇದರಲ್ಲಿ ಸಾವಿರದ ಇನ್ನೂರು ಸ್ವತಂತ್ರ್ಯ ಗಾದೆಗಳಿವೆ. ಆದರೆ ಇವು ಹೆಚ್ಚು ಗ್ರಾಮೀಣ ಸ್ವರೂಪದ್ದಾಗಿವೆ. ಮೇಲಿನ ಕೃತಿಗೆ ಹೇಳಿದ ಮಾತುಗಳೇ ಇದಕ್ಕೂ ಅನ್ವಯಿಸುತ್ತವೆ.
ಇವನ್ನು ಓದಿದಾಗ ಇಂಥ ಗಾದೆಗಳ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆ ಏಳುತ್ತದೆ. ನಾಗರಿಕತೆಯ ಪರಿಣಾಮದಿಂದ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ಪರಂಪರಾಗತವಾದ ಗಾದೆಗಳು ಉಳಿಯುತ್ತಿಲ್ಲ; ಹಾಗೆಯೇ ನಾಗರಿಕವಾದ ಹೊಸ ಗಾದೆಗಳು ಜನಪದದಲ್ಲಿ ಸೃಷ್ಟಿಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಇಂಥ ಸ್ವತಂತ್ರ್ಯ ಗಾದೆಗಳು ಜನಪದ ಸಮುದಾಯದಲ್ಲಿ ರೂಢಿಯ ಗಾದೆಗಳಂತೆ ಜನಪ್ರಿಯವಾಗುವುದು ತೀರ ಅಪರೂಪ. ಆದರೂ ಇವನ್ನು ಓದಿ ಸಂತೋಷಪಡಬಹುದು. ಒಟ್ಟಿನಲ್ಲಿ ಕನ್ನಡದ ದೃಷ್ಟಿಯಿಂದ ಗಾದೆಗಳ ಕ್ಷೇತ್ರದಲ್ಲಿ ಇವು ಹೊಸ ಪ್ರಯೋಗಗಳು. ಬೇರೆ ಬೇರೆ ದೇಶಗಳಲ್ಲಿ ಬಹಳ ಹಿಂದೆಯೇ ಇಂಥ ಪ್ರಯೋಗಗಳು ನಡೆದುದಕ್ಕೆ ನಿದರ್ಶನಗಳಿವೆ.
ಗಾದೆಗಳ ಸಂಗ್ರಹ ಪ್ರಕಟಣೆಗಳ ಜೊತೆಯಲ್ಲಿಯೇ ವಿಮರ್ಶನಕಾರ್ಯವೂ ಕನ್ನಡದಲ್ಲಿ ನಡೆದಿದೆ. ಬಿಡಿ ಲೇಖನಗಳ ರೂಪದಲ್ಲಿ, ಮುನ್ನುಡಿ, ಪ್ರಸ್ತಾವನೆಗಳಲ್ಲಿ ಇದರ ಅನೇಕ ವಿಷಯಗಳು ಚರ್ಚಿತವಾಗಿವೆ. ಆದರೆ ಇವೆಲ್ಲವನ್ನೂ ಇಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಪುಸ್ತಕರೂಪದಲ್ಲಿ ಪ್ರಕಟವಾಗಿರುವುದನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಬಹುದು. ಇಲ್ಲಿಯವರೆಗೆ ಇಂಥ ಮೂರು ವಿಮರ್ಶನ ಗ್ರಂಥಗಳು ಮಾತ್ರ ಬಂದಿವೆ. ಮೊದಲನೆಯದು 1936ರಲ್ಲಿ ಪ್ರಕಟಗೊಂಡ ಕುಲಕರ್ಣಿ ಪ್ರಹ್ಲಾದರ ನಾಣ್ಣುಡಿ. ಗಾದೆಗಳ ಉಗಮ ವಿಕಾಸ, ಸ್ವರೂಪಗಳನ್ನು ಕುರಿತು ಇದರಲ್ಲಿ ವಿಚಾರ ಮಾಡಲಾಗಿದೆ. ಬಹಳ ವರ್ಷಗಳ ಹಿಂದೆಯೇ ಗಾದೆಗಳ ಶಾಸ್ತ್ರೀಯ ಅಧ್ಯಯನದ ಆವಶ್ಯಕತೆಯನ್ನು ಕಂಡುಕೊಂಡುದು ಕುಲಕರ್ಣಿ ಯವರ ವೈಶಿಷ್ಟ್ಯವಾಗಿದೆ.
ಈ ಬಗೆಯ ಎರಡನೆಯ ಗ್ರಂಥವೆಂದರೆ ಎ.ಕೆ.ರಾಮಾನುಜನ್ ಅವರ ಗಾದೆಗಳು ಎಂಬ ಪುಸ್ತಿಕೆ. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯ ಗ್ರಂಥವಾದ ಇದು 1955ರಲ್ಲಿ ಪ್ರಕಟಗೊಂಡಿತು. ಗಾದೆಗಳ ವಿವರಣಾತ್ಮಕ ವಿಮರ್ಶೆ ಹಾಗೂ ಸೈದ್ಧಾಂತಿಕ ಪ್ರಸ್ತಾಪಗಳು ಇದರಲ್ಲಿ ಮೇಳವಿಸಿವೆ. ಆದರೂ ಗಾದೆಯ ಸಮಗ್ರ ಮೀಮಾಂಸೆ ಇದರಿಂದ ದೊರಕಲಾರದು; ಮಾತ್ರವಲ್ಲ, ಅಂಥ ಒಂದು ದೊಡ್ಡ ಕೆಲಸದ ಕಡೆಗೆ ಬೆರಳು ತೋರಿಸುತ್ತದೆ.

ಇಂಥ ಕೊರತೆಯನ್ನು ತಕ್ಕಮಟ್ಟಿಗಾದರೂ ತುಂಬಿಸಿಕೊಟ್ಟುದು ನಂ. ತಪಸ್ವೀ ಕುಮಾರ್ ಅವರ ಕನ್ನಡ ಗಾದೆಗಳ ಸಮೀಕ್ಷೆ ಎಂಬ ಪುಸ್ತಕ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಗೃಹಸರಸ್ವತಿ ಗ್ರ್ರಂಥಮಾಲೆಯ ಪ್ರಕಟಣೆ ಇದು. ಇಲ್ಲಿ ಗಾದೆಗಳ ಹುಟ್ಟು ಬೆಳೆವಣಿಗೆ, ಸ್ವರೂಪಲಕ್ಷಣ ಮೊದಲಾದವನ್ನು ಚರ್ಚಿಸಿರುವು ದಲ್ಲದೆ, ಗಾದೆಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಮೌಲ್ಯಗಳನ್ನು ವಿಶ್ಲೇಷಿಸಲಾಗಿದೆ. ಗಾದೆಗಳ ಅಧ್ಯಯನದ ಇತಿಹಾಸದ ಸ್ಥೂಲ ಪರಿಚಯವೂ ಕಡೆಯಲ್ಲಿ ಸೇರಿದೆ. ವಿಷಯ ಸಮೃದ್ಧವೂ ವಿಚಾರಸಂಪನ್ನವೂ ಆದ ಈ ಕೃತಿ, ಈ ದಿಕ್ಕಿನಲ್ಲಿ ಕೆಲಸಮಾಡುವವರಿಗೆ ಅತ್ಯುಪಯುಕ್ತವೂ ಮಾರ್ಗದರ್ಶಕವೂ ಆದುದಾಗಿದೆ.

ಹೀಗೆ ಗಾದೆಗಳನ್ನು ಕುರಿತ ವಿವೇಚನೆ ಕೆಲಮಟ್ಟಿಗೆ ನಡೆದಿದ್ದರೂ ಆಗಬೇಕಾದುದು ಇನ್ನೂ ಬಹಳವಿದೆ. ಇದಲ್ಲದೆ ಗಾದೆಗಳ ಸಂಗ್ರಹಕಾರ್ಯವೇ ಸಮಗ್ರವಾಗಿ ಆಗಿಲ್ಲ. ಗಾದೆಗಳು ನಿತ್ಯ ಹುಟ್ಟುತ್ತವೆ, ನಿತ್ಯ ಸಾಯುತ್ತವೆ ಎಂಬ ಮಾತೊಂದಿದೆ. ಈಗ ಗಾದೆಗಳು ಹುಟ್ಟುತ್ತಿಲ್ಲ, ಹುಟ್ಟಿದ ಗಾದೆಗಳು ಸಾಯುತ್ತಿರುವುದಂತೂ ಖಂಡಿತ. ಹಾಗೆ ಸಾಯುವುದಕ್ಕಿಂತ ಮುಂಚೆ ಅವನ್ನು ಉಳಿಸಿಕೊಳ್ಳಬೇಕಾದುದು ನಾಡಿನ ಆದ್ಯ ಕರ್ತವ್ಯವಾಗಿದೆ.
ಗಾನರೀಯ : ನೈಸೀರಿಯ ಗಾನರೀಯೀ ಎಂಬ ಏಕಾಣುಜೀವಿಯಿಂದ ಉಂಟಾಗುವ ಒಂದು ತೆರನ ಗುಹ್ಯರೋಗ. ಅಂಟುರೋಗವೂ ಹೌದು. ರೋಗಗ್ರಸ್ತ ಅಂಗಗಳಲ್ಲಿ ಕೀವು ಸ್ರವಿಸುವುದು ಇದರ ಮುಖ್ಯಗುಣ. ಮೂತ್ರನಾಳಗಳಿಂದ ಹೊರಸೂಸುವ ಕೀವು ವೀರ್ಯವೆಂದೂ ಹೀಗೆ ಹೊರಸೂಸಲು ಶುಕ್ಲಗ್ರಂಥಿಯ ದೋಷವೇ ಕಾರಣವೆಂದೂ ಬಗೆದು ಗಾನರೀಯವನ್ನು ಶುಕ್ಲದೋಷವೆಂಬ ಹೆಸರಿನಿಂದ ಕರೆಯುವುದುಂಟು. ಮನುಷ್ಯರಲ್ಲಿ ಮಾತ್ರ ಈ ರೋಗ ಸಹಜವಾಗಿ ಕಾಣಿಸುತ್ತದೆ. ಬೇರಾವ ಪ್ರಾಣಿಗಳಲ್ಲೂ ಕಂಡುಬರುವುದಿಲ್ಲ. ಆದರೆ ಪ್ರಯೋಗಶಾಲೆಗಳಲ್ಲಿ ಕೋತಿ, ಮೊಲ ಮುಂತಾದವಕ್ಕೆ ಈ ರೋಗ ಅಂಟುವಂತೆ ಮಾಡಬಹುದು. ಸಾಮಾನ್ಯವಾಗಿ ಗಂಡಸರಲ್ಲಿ ಮೂತ್ರನಾಳದಲ್ಲಿಯೂ ಹೆಂಗಸರಲ್ಲಿ ಹೆಚ್ಚಾಗಿ ಗರ್ಭಕೋಶ ಕಂಠ (ಸೆರ್ವಿಕ್ಸ) ಇಲ್ಲವೆ ಮೂತ್ರನಾಳದಲ್ಲಿಯೂ ಕಾಣಿಸಿಕೊಳ್ಳುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ